ಬಾಲಗಂಧರ್ವ 
1888-1967. ಮರಾಠೀ ರಂಗಭೂಮಿಯ ಶ್ರೇಷ್ಠ ನಟ. ಗಾಯನ ಹಾಗೂ ಸ್ತ್ರೀಪಾತ್ರಧಾರಣೆ ಈತನ ವೈಶಿಷ್ಟ್ಯ. ಈತನ ಪೂರ್ಣ ಹೆಸರು ನಾರಾಯಣ ಶ್ರೀಪಾದ ರಾಜಹಂಸ. ತಂದೆ ಶ್ರೀಪಾದರಾವ್ ಒಳ್ಳೆಯ ಗಾಯಕ ಹಾಗೂ ಸಿತಾರ್‍ವಾದಕರಾಗಿದ್ದರು. ಈತನ ಸೋದರಮಾವ ವಾಸುದೇವರಾವ ಪುಣತಾಂಬೇಕರ್ ನಾಟ್ಯಕಲಾಪ್ರವರ್ತಕ ಮಂಡಲಿಯ ಮಾಲೀಕರಾಗಿದ್ದರು. ಆದ್ದರಿಂದ ರಾಜಹಂಸ ಕುಟುಂಬಕ್ಕೆ ಮಂಡಲಿಯ ನಾಟಕಗಳನ್ನು ನೋಡುವ ಅವಕಾಶ ದೊರಕಿತ್ತು. ಹೀಗಾಗಿ ಈತನಿಗೆ ಇತ್ತ ತಂದೆ ಅತ್ತ ತಾಯಿಯ ತವರುಮನೆ ಎರಡೂ ಕಡೆಯಿಂದಲೂ ಗಾಯನಾಭಿನಯಗಳ ವಾತಾವರಣ ದೊರಕಿತು. ನಾರಾಯಣನ ಪ್ರಾಥಮಿಕ ಶಿಕ್ಷಣ ನಾಗಠಾಣ ಎಂಬಲ್ಲಾಯಿತು. ಅನಂತರ ಜಳಗಾಂವ್ ನಗರದಲ್ಲಿ ಅಭ್ಯಾಸ. ವಿದ್ಯಾರ್ಥಿ ದೆಸೆಯಲ್ಲಿ ಈತ ಓದಿಗಿಂತ ಗಾಯನ ಅಭ್ಯಾಸದಲ್ಲೇ ಹೆಚ್ಚು ಸಮಯ ಕಳೆದ. ಮ್ಹಾಳಸ್ ಮೆಹಬೂಬ್‍ಖಾನ್ ಎಂಬ ಗವಾಯಿಯ ಹತ್ತಿರ ಗಾಯನದ ಶಿಕ್ಷಣ ಪಡೆದ. ಒಮ್ಮೆ ಪುಣೆಗೆ ಆಗಮಿಸಿದ ಲೋಕಮಾನ್ಯ ತಿಲಕರು ಬಾಲಕ ನಾರಾಯಣನ ಗಾಯನ ಕೇಳಿ ಸಂತೋಷಿಸಿ ಈತ ಸಾಕ್ಷಾತ್ ಬಾಲಗಂಧರ್ವ ಎಂದು ಉದ್ಗಾರವೆತ್ತಿದರು. ಈ ಉದ್ಗಾರವೇ ಮುಂದೆ ನಾರಾಯಣ ರಾಜಹಂಸನ ನಿಜನಾಮವಾಗಿ ಬಳಕೆಯಲ್ಲಿ ಬಂದಿತು.

ಈತನ ಬಾಲ್ಯದಲ್ಲೇ ತಂದೆ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಾಗ ಈತನ ಓದಿಗೆ ತೆರೆಬಿದ್ದಿತು. ಮುಂದೆ ಈತ ಕೊಲ್ಲಾಪುರಕ್ಕೆ ಹೋದಾಗ ಅಲ್ಲಿನ ರಾಜ ಛತ್ರಪತಿ ಶಾಹೂ ಮಹಾರಾಜ ಈತನ ಗಾಯನ ಕೇಳಿ ಮೆಚ್ಚಿಕೊಂಡು ಸಹಯಕ್ಕೆ ನಿಂತರು. ಇಲ್ಲಿಯೇ ಈತನ ಮದುವೆ ಪಾರ್ಗಾಂವಕರ್ ಮನೆತನದ ಲಕ್ಷ್ಮೀ ಎಂಬಾಕೆಯೊಂದಿಗೆ ಆಯಿತು. ಅನಂತರ ಕಿರ್ಲೋಸ್ಕರ್ ಕಂಪನಿಯಲ್ಲಿ ನಾಟ್ಯಾಚಾರ್ಯ ದೇವಲ್ ಅವರ ಬಳಿ ಶಕುಂತಲಾ ಪಾತ್ರದ ಅಧ್ಯಯನ ಆರಂಭವಾಯಿತು. ರೂಪ, ವಯಸ್ಸು ಧ್ವನಿಗಳ ಹುರಿಯಲ್ಲಿ ಪ್ರೇಕ್ಷಕ ಸಂದಣಿಯನ್ನು ಬಾಲಗಂಧರ್ವ ಕಟ್ಟಿಹಾಕಿದ. ಅಂದಿನಿಂದ ಯಾವುದೇ ಪಾತ್ರವನ್ನು ನಿರ್ವಹಿಸಲಿ ಮೋಹಕದರ್ಶನ, ಗಂಧರ್ವತುಲ್ಯ ಗಾಯನ ಪರಿಣಾಮಕಾರಕ ಅಭಿನಯ, ವಿಪುಲದ್ರವ್ಯಾರ್ಜನೆ, ಲೋಕಪ್ರಿಯತೆ, ರಂಗಭೂಮಿಗಾಗಿ ಮಾಡುವ ವಿಶೇಷ ಖರ್ಚು ಬಾಲಗಂಧರ್ವನ ಆಯುಷ್ಯದ ಚಿತ್ರವಾಯಿತು. ಸುಭದ್ರ ಇಲ್ಲವೇ ರುಕ್ಮಿಣಿಯ ಪ್ರೇಮಕಾತುರತೆ, ದೇವಯಾನಿ ಇಲ್ಲವೇ ದ್ರೌಪದಿಯ ತೇಜಸ್ವೀತನ ಭಾಮಿನಿಯ ಶೃಂಗಾರ (ಮಾನಾಪಮಾನ ನಾಟಕ), ರೇವತಿಯ ವೈಯಾರ (ಸಂಶಯ ಕಲ್ಲೋಲ ನಾಟಕ) ವಸಂತಸೇನೆಯ ಉದಾರ ಪ್ರೇಮ ಸಿಂಧೂವಿನ (ಏಕಚ್ ಪ್ಯಾಲಾ) ಕಾರುಣ್ಯ-ಯಾವವೂ ಪ್ರೇಕ್ಷಕರಿಗೆ ಅಭಿನಯವಾಗಿ, ಸುಳ್ಳಿನ ಕಂತೆಯಾಗಿ, ಸತ್ಯದ ಆಭಾಸವಾಗಿ ತೋರಲೇ ಇಲ್ಲ, ಪ್ರೇಕ್ಷಕರಿಗೆ ಅವು ನಾಟಕಗಳಾಗದೆ ಜೀವಂತ ಅನುಭವಗಳಾಗಿ ತೋರಿದವು. ವೇಷಭೂಷಣ, ಕೇಶಭೂಷಣ ಹೆಸರಿನ ಅನುಕರಣ ಮಹಾರಾಷ್ಟ್ರದಲ್ಲಿ ಅಷ್ಟೇ ಅಲ್ಲ ಪಕ್ಕದ ಕನ್ನಡ ನಾಡಿನ ಜನಜೀವನದಲ್ಲೂ ಪ್ರವಹಿಸಿಬಿಟ್ಟಿತು. ಅಂದು ಪಾತ್ರಧಾರಿ ವ್ಯಕ್ತಿ ಧರಿಸುವ ಆಭರಣಗಳು ಚಿನ್ನದವೇ ಆಗಿರುತ್ತಿದ್ದವು. ಆ ಕಾರಣದಿಂದ ಈತ ರಂಗಭೂಮಿಯ ರಾಜ ರಾಜೇಶ್ವರ ಎನ್ನಿಸಿಕೊಂಡ. ಕಿರ್ಲೋಸ್ಕರ ಕಂಪನಿ, ಗಂಧರ್ವ ನಾಟಕಮಂಡಲಿ ಇವು ಬಾಲಗಂಧರ್ವನ ಮೂಲಕ ಮರಾಠಿ ರಂಗಭೂಮಿಯ ಸುಂದರ ಸ್ವಪ್ನಲೋಕಗಳೆನಿಸಿಕೊಂಡವು. ಗಂಧರ್ವನಾಟಕ ಮಂಡಳಿಯ ಸಾಲದ ಹೊರೆ ಹೆಚ್ಚಾದಾಗ ವಿ. ಶಾಂತಾರಾಮರ ಅಭಿಪ್ರಾಯದ ಮೇರೆಗೆ ಪ್ರಭಾತ ಫಿಲ್ಮ್ ಕಂಪನಿಯಲ್ಲೂ ಈತ ಕೆಲಸ ಮಾಡಿದ. ಕರಾರು ಮುಗಿದ ಕೂಡಲೇ ಮತ್ತೆ ರಂಗಭೂಮಿಗೆ ಮರಳಿದ. ಆದರೆ ಈತನ ಜೀವನ ಮೊದಲಿನಂತೆ ಸುಖಮಯವಾಗಲಿಲ್ಲ. ಕೊನೆಯ ದಿನಗಳಲ್ಲಿ ಭೀಕರ ಆರ್ಥಿಕ ದುಸ್ಥಿತಿಗೆ ಒಳಗಾದ ಈತ ಅರ್ಧಾಂಗ ವಾಯುಬೇನೆಯಿಂದ ನರಳಿ ಸತ್ತ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ